ಲಿಂಗಸೂಗೂರು ಅಮರೇಶ್ವರ ವಿದ್ಯಾವರ್ಧಕ ಸಂಘ ಭೂ ಮಂಜೂರಾತಿ ಹಿಂದಕ್ಕೆ ಪಡೆಯಲು ಆದೇಶ

ಗುಲಬರ್ಗಾ ಸೆ.೧೯ ಲಿಂಗಸ್ಗೂರಿನ ಅಮರೇಶ್ವರ ವಿದ್ಯಾ ವರ್ಧಕ ಸಂಘದ ಜಮೀನು ಮಂಜೂರಾತಿ ಆದೇಶವನ್ನು ಗುಲ್ಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ರಾಜನೀಶ ಗೋಯಲ್‌ ರದ್ದುಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನ(ಛಾವಣಿ) ಅಮರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕರಡಕಲ್‌ ಗ್ರಾಮದ ಸರ್ವೇ ನಂ. ೩೯೭/೧ರ ೧-೨೦ ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸದೆ ಬೇರೆ ಸಂಸ್ಥೆಗೆ ಬಾಡಿಗೆಗೆ ನೀಡಿ ಆದಾಯ ಸೃಷ್ಟಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ ೨-೩-೧೯೭೭ರ ಭೂಮಿ ಮಂಜೂರಾತಿ ಆದೇಶವನ್ನು ಕೂಡಲೇ ರದ್ದುಪಡಿಸಿ ನೀಡಿದ ಭೂಮಿಯನ್ನು ಈಗಿದ್ದ ಸ್ಥಿತಿಯಲ್ಲೇ ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ್‌ ಗೋಯಲ್‌ ರಾಯಚೂರು ಜಿಲ್ಲಾಧಿ ಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಜಮೀನನ್ನು ಅಮರೇಶ್ವರ ಬಾಲಕಿಯರ ಪ್ರೌಢಶಾಲೆ ಕಟ್ಟಡ ನಿರ್ಮಿಸಲು ೩೦ ವರ್ಷಗಳ ಕಾಲಾವಧಿಗಾಗಿ ಒಂದು ವರ್ಷಕ್ಕೆ ಒಂದು ಎಕರೆಗೆ ೧೦೦ ರೂ. ದರದಂತೆ ಅಮರೇಶ್ವರ ವಿದ್ಯಾವರ್ಧಕ ಸಂಘಕ್ಕೆ ರಾಯಚೂರು ವಿಶೇಷ ಜಿಲ್ಲಾಧಿ ಕಾರಿಗಳು ೧೯೭೭ರ ಮಾರ್ಚ್‌ ೨ರಂದು ಮಂಜೂರು ಮಾಡಿದ್ದರು. ಈ ಶೈಕ್ಷಣಿಕ ಸಂಸ್ಥೆಯವರು ಜಿಲ್ಲಾಧಿಕಾರಿಗಳ ಭೂ ಮಂಜೂರಾತಿ ಆದೇಶದ ಷರತ್ತು ಉಲ್ಲಂಘಿಸಿ ಲಿಂಗಸುಗೂರಿನ ಸರ್ಕಾರಿ ತರಬೇತಿ ಕೇಂದ್ರಕ್ಕೆ ವಾರ್ಷಿಕ ಬಾಡಿಗೆ ನಿಗದಿಪಡಿಸಿ ಬಾಡಿಗೆ ನೀಡಿ ಜಿಲ್ಲಾಧಿ ಕಾರಿಗಳ ಷರತ್ತು ಉಲ್ಲಂಘಿಸಿದ್ದಾರೆ. ಈ ಸಂಸ್ಥೆಯು ಸರ್ಕಾರಿ ತರಬೇತಿ ಸಂಸ್ಥೆಯಿಂದ ೨೮-೧೦-೧೯೯೮ ರಿಂದ ೨೦೧೧ರ ಜನವರಿ ವರೆಗಿನ ಅವಧಿಗಾಗಿ ಒಟ್ಟು ೧೫,೦೨,೨೧೨ ರೂ. ಬಾಡಿಗೆ ವಸೂಲಿ ಮಾಡಿ ಭೂ ಮಂಜೂರಾತಿ ಷರತ್ತು (೪)ನ್ನು ಉಲ್ಲಂಘಿಸಿದ್ದಾರೆ. ಇದಲ್ಲದೆ ಸದರಿ ಸಂಸ್ಥೆಯು ೧-೩-೨೦೦೭ರಿಂದ ಬಾಡಿಗೆ ಹಣ ಪಾವತಿಸದೇ ಜಿಲ್ಲಾಧಿಕಾರಿಗಳ ಒಂದನೇ ಷರತ್ತನ್ನೂ ಉಲ್ಲಂಘಿಸಿ ರುವುದು ಕಂಡು ಬರುತ್ತದೆ ಎಂದು ಲಿಂಗಸುಗೂರು ಸಹಾಯಕ ಆಯುಕ್ತರು ದಿನಾಂಕ ೧೮-೮- ೨೦೧೧ರಂದು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

No Comments to “ಲಿಂಗಸೂಗೂರು ಅಮರೇಶ್ವರ ವಿದ್ಯಾವರ್ಧಕ ಸಂಘ ಭೂ ಮಂಜೂರಾತಿ ಹಿಂದಕ್ಕೆ ಪಡೆಯಲು ಆದೇಶ”

add a comment.

Leave a Reply

You must be logged in to post a comment.