ರವಿ ಮೂಡಿತು ಹಂಸ ಹಾಡಿತು

ಹಿಂದೆ ರಾಜ್‌ಕುಮಾರ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಕಂಬ ಒಡೆದಾಗ ನರಸಿಂಹ ಅವತಾರವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈಗ ಪುನೀತ ಗದೆಯ ಮೂಲಕ ಕಂಬ ಒಡೆದು ’ನರಸಿಂಹ’ನ ಗಾನವನ್ನು ಲೋಕಾರ್ಪಣೆ ಮಾಡಿದ್ದಾರೆ. ಪಾರ್‌ ಎ ಚೇಂಜ್‌ ಪುನೀತ್‌ ಒಂದು ರವಿ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ್ದು ಅಂದಿನ ವಿಶೇಷ. ಎಲ್ಲಾ ಹಾಡುಗಳನ್ನು ಸೆಟ್‌ ಹಾಕಿಯೇ ಚಿತ್ರಿಸಲಾಗಿದೆಯಂತೆ. ಈಗಾಗಲೇ ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಪೋಸ್ಟ್‌ ಪ್ರೋಡಕ್ಷನ್‌ ಕೆಲಸ ಮುಗಿಸಿದ ತಕ್ಷಣ ಮುಂದಿನ ತಿಂಗಳು ತೆರೆ ಕಾಣುವ ಎಲ್ಲಾ ಸಾಧ್ಯತೆಗಳಿವೆ. ನಿರ್ಮಾಪಕ ಎಂ.ಎನ್‌.ಕುಮಾರ್‌. ಬಹಳ ದಿನಗಳ ನಂತರ ಹಂಸಲೇಖ ರವಿಚಂದ್ರನ್‌ ಜೋಡಿಯಾಗಿ ಮೂಡಿಬರುತ್ತಿರುವ ಚಿತ್ರವಿದು. ರವಿಚಂದ್ರನ್‌ ಕಾಲ್‌ಶೀಟ್‌ನ್ನು ಸಮರ್ಥವಾಗಿ ಬಳಸಿಕೊಂಡು ಶೂಟಿಂಗ್‌ ಮುಗಿಸಿರುವ ಏಕೈಕ ವ್ಯಕ್ತಿ ಎಂಬ ಹೊಗಳಿಕೆಗೆ ಭಾಜನರಾಗಿದ್ದಾರೆ ಮೋಹನ್‌. ಈಗಾಗಲೇ ಆಡಿಯೋ ಬಿಡುಗಡೆ ಮಾಡಿ ಒಳ್ಳೆ ಬೆಲೆಗೆ ಟಿವಿ ರೈಟ್ಸ್‌ ಮಾರಿಕೊಂಡಿರುವ ಚಿತ್ರತಂಡ ಪಾಸಿಟಿವ್‌ ಮೂಡ್‌ನ ಲ್ಲಿದ್ದಾರೆ. ಬಹಳ ದಿನಗಳ ನಂತರ ಹಂಸ-ರವಿ ಒಂದುಗೂಡಿದ್ದಾರೆ. ಹೀಗಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತದೆ. ಜನರೇ ಕುತೂಹಲ ಇಟ್ಟುಕೊಳ್ಳಲಿ ನಾವಾಗಿ ನಾವೇ ಹೈಪ್‌ ಕ್ರಿಯೇಟ್‌ ಮಾಡೋದು ಬೇಡ ಅನ್ನೋದು ರವಿ ಆರ್ಡರು! ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಸಿನಿಮಾ ಸಂಪೂರ್ಣ ‘ಪ್ಯಾಮಿಲಿ’ ಸಬ್ಜೆಕ್ಟ್‌ ಆಗಿರೋದ್ರಿಂದ ಎಂದಿನ ‘ರಸಿಕ‘ ರವಿಚಂದ್ರನ್‌ ಕಾಣಸಿಗೋಲ್ಲ ಎಂಬುದು ಡೈರೆಕ್ಟರ್‌ ಉವಾಚ. ಆದರೆ ರವಿ ಅಭಿಮಾನಿಗಳಿಗೆ ನಿರಾಸೆ ಮಾಡಬಾರದೆಂಬ ಕಾರಣಕ್ಕೆ ಎರಡು ಮಜಬೂತಾದ ಹಾಡುಗಳನ್ನು ಇಡಲಾಗಿದೆಯಂತೆ. ಒಂದು ನಿಶಾ ಪಟೇಲ್‌ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡರೆ ಮತ್ತೊಂದು ಸಂಜನಾ ಜೊತೆ ಮರಳಿನಲ್ಲಿ ಹೊರಳಾ ಡಿದ್ದಾರಂತೆ ರವಿ. ಹೀಗಾಗಿ ಎಲ್ಲಾ ಹಾಡು ಗಳನ್ನೂ ಕಮರ್ಷಿಯಲ್‌ ಟೆಂಪೋನಲ್ಲೇ ಮಾಡಿದ್ದಾರೆ ಹಂಸ್‌. ಪುನೀತ್‌ರಾಜ್‌ಕುಮಾರ್‌ ಅಭಿನಯದ ಎಲ್ಲಾ ಸಿನಿಮಾಗಳಿಗೂ ರವಿಚಂದ್ರನ್‌ ಆರಂಭ ಫಲಕ ತೋರಿದ ದಾಖಲೆಯಿದೆ. ನಿಶಾ ಪಟೇಲ್‌ ಈ ಹಿಂದೆ ತೆಲುಗಿನಲ್ಲಿ ‘ಕೊಮರಂ ಪುಲಿ’ಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡದ್ದು ಈಗ ಇತಿಹಾಸ ಈಗ ರವಿ ಜೊತೆ ಹೆಜ್ಜೆ ಹಾಕಿದ್ದಾಳೆ. ಇಲ್ಲೂ ಕೂಡ ಒಂದು ಹಾಡಿನಲ್ಲಿ ಸಿಕ್ಕಾಪಟ್ಟೆ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಸ್ವತಃ ನಿಶಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಎಂ.ಎನ್‌.ಕುಮಾರ್‌ ವಿತರಕರೂ ಆಗಿರೋದ್ರಿಂದ, ಚಿತ್ರವನ್ನು ಸುಮಾರು ೧೫೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಾಣಿಸುವ ಇರಾದೆ ಅವರದ್ದು. ಒಟ್ಟು ನಾಲ್ಕು ಫೈಟು. ಆರು ಹಾಡು ಚಿತ್ರ ಭರಪೂರ ಮನರಂಜನೆಗೆ ಕೊರತೆಯಿಲ್ಲ ಅನ್ನೋದು ಚಿತ್ರತಂಡದ ಮಾತು. ಸೋ… ಇಷ್ಟರಲ್ಲೇ ನರಸಿಂಹ ಥಿಯೇಟರ್‌ಗೆ ದಾಂಗುಡಿಯಿಡಲಿದ್ದಾನೆ. ಅಲ್ಲಿಯವರೆಗೂ ನರಸಿಂಹ ಹಾಡು ಕೇಳುತ್ತಿರಿರಿ…

No Comments to “ರವಿ ಮೂಡಿತು ಹಂಸ ಹಾಡಿತು”

add a comment.

Leave a Reply

You must be logged in to post a comment.