ರೋಗಿಗಳ ಪರದಾಟ, ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ

ಶಹಾಪೂರ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಇಂದು ಜಿಲ್ಲಾ ವೈದ್ಯರಿಂದ ಪ್ರತಿಭಟನೆ ನಡೆಸಲಾಯಿತು. ಪರಿಣಾಮವಾಗಿ ರೋಗಿಗಳು ಪರದಾಡುವಂತಾಯಿತು. ಶಹಾಪೂರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಅನೀಲ್‌ಕುಮಾರ ಮೇಲೆ ಕೆಲವರು ಹಲ್ಲೆ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಐಎಂಎ ಜಿಲ್ಲಾ ಶಾಖೆ ಮತ್ತು ಆಯುಷ್ಯ ಫೆಡರೇಶನ್‌ ಆಫ್‌ ಇಂಡಿಯಾ ಜಿಲ್ಲಾ ಘಟಕ ಪದಾಧಿಕಾರಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಹಲ್ಲೆ ಮಾಡಿದವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ. ಅಲ್ಲದೇ, ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲಿನ ಹಿಂಸಾಚಾರಗಳನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವು ಅಧಿನಿಯಮ ೨೦೦೯ ರಚನೆಗೊಂಡು ೨ ವರ್ಷಗಳಾಗುತ್ತಾ ಬಂದಿದೆ. ಆದರೆ ಸಾರ್ವಜನಿಕ ಸೇವೆಯಲ್ಲಿರುವ ವೈದ್ಯರ ಮತ್ತು ವೈದ್ಯೊಪಚಾರ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ಈ ಅಧಿನಿಯಮ ಕಟ್ಟುನಿಟ್ಟಾಗಿ ಜಾರಿಗೋಳಿಸಬೇಕು ಎಂದು ಆಗ್ರಹಿಸಿದರು. ವೈದ್ಯರ ಮೇಲೆ ಹಲ್ಲೆ ಮಾಡಿದರವನ್ನು ತಕ್ಷಣವೇ ಬಂಧಿಸಬೇಕು. ವೈದ್ಯರು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ರಕ್ಷಣೆ ನೀಡುವತ್ತ ಗಮನ ಹರಿಸಬಹೇಕು ಎಂದು ಆಗ್ರಹಿಸಿದರು. ಜೊತೆಗೆ ಜಿಲ್ಲಾ ಪೋಲಿಸ್‌ ವರೀಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಜಿಲ್ಲಾ ವೈದ್ಯರುಗಳು ಸೂಕ್ತ ಕ್ರಮಕ್ಕೆ ಮನವಿ ಮಾಡಿದರು. ಎಸ್‌ಪಿ ಡಿ ರೂಪಾ ಮೌದ್ಗಿಲ್‌ ಮಾತನಾಡಿ, ವೈದ್ಯರ ಮೇಲೆ ಆಗುತ್ತಿರುವ ಹಲ್ಲೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಇದರಿಂದ ವೈದ್ಯರು ಯಾವುದೇ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಾ.ಹೊನಗುಂಟಿ, ಡಾ.ಸಿದ್ದೇಶ್‌ ಜಾಕಾ, ಡಾ.ಸಿ.ಎಮ್‌.ಪಾಟೀಲ್‌, ಆಯುಷ್‌ ಫೆಡರೇಶನ್‌ ಆಪ್‌ ಇಂಡಿಯ ಜಿಲ್ಲಾಧ್ಯಕ್ಷ ಡಾ. ವಿಜಯ ಸಿಂದೆ, ಡಾ. ಚಂದ್ರಶೇಖ ಸುಬೇದಾರರು, ಡಾ. ಸುದತ್ತ ದರ್ಶನಪೂರ. ಡಾ. ಸಂಜೀವಕುಮಾರ ರಾಯಚೂರಕರ್‌, ಡಾ. ಪ್ರಕಾಶ ರಾಜಾಪೂರೆ, ಡಾ.ಎನ್‌.ವಿ ವಾರದ್‌ ಸೇರಿದಂತೆ ಮತ್ತಿತರರು ಭಾಗವಹಿಸಿದರು. ಪರದಾಟ : ವೈದ್ಯರ ಮುಷ್ಟರಕ್ಕೆ ಬೆಂಬಲಿಸಿ ಔಷಧಿ ಆಂಗಡಿಗಳ ಬಂದ್‌ ಆದ ಪರಿಣಾಮ ರೋಗಿಗಳು ಪರದಾಟಿದ ಘಟನೆಗಳು ನಡೆದವು. ಔಷಧಿ ಅಂಗಡಿಗಳು ಮಧ್ಯಾಹ್ನ ತೆರೆದರೆ, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್‌ ಮಾಡಿದ್ದರಿಂದ ಚಿಕಿತ್ಸೆಗೆ ಬಂದಿದ್ದವರು ಮರಳಿ ವಾಪಾಸ್‌ ಹೋಗಬೇಕಾಯಿತು.

No Comments to “ರೋಗಿಗಳ ಪರದಾಟ, ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ”

add a comment.

Leave a Reply

You must be logged in to post a comment.